ನೀರ್ಗುಂದ-
	ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿರುವ ಒಂದು ಸಣ್ಣಹಳ್ಳಿ. ಹೊಸದುರ್ಗದ ಉತ್ತರಕ್ಕೆ 11 ಕಿಮೀ. ದೂರದಲ್ಲಿದೆ. ಕರ್ನಾಟಕದ ಪ್ರಾಚೀನ ಪಟ್ಟಣಗಳಲ್ಲಿ ಇದೂ ಒಂದಾಗಿತ್ತು. ಕ್ರಿ.ಪೂ.160ರಲ್ಲಿ ಉತ್ತರದಿಂದ ಬಂದ ರಾಜಪರಮೇಶ್ವರರಾಯ ಎಂಬವನ ಮಗ ನೀಲಶೇಖರ ಈ ನಗರವನ್ನು ನಿರ್ಮಿಸಿ ಇದಕ್ಕೆ ನೀಲಾವತಿ ಪಟ್ಟಣವೆಂದು ಹೆಸರಿಟ್ಟನೆಂಬುದು ಐತಿಹ್ಯ. ವಿಕ್ರಮರಾಯನೆಂಬ ದೊರೆಯ ಮಗಳಾದ ರತ್ನಾವತಿ ಅಥವಾ ರೂಪವತಿಯ ಸೌಂದರ್ಯಕ್ಕೆ ಮರುಳಾಗಿ ಆಕೆಯ ಕೈಹಿಡಿಯುವ ಆಸೆಯಿಂದ ರತ್ನಪುರಿಯ ವಜ್ರಮುಕ್ತ ರಾಜನ ಮಗ ಚಿತ್ರಶೇಖರ ತನ್ನ ಅಣ್ಣ ಸೋಮಶೇಖರನೊಡನೆ ಈ ಪಟ್ಟಣಕ್ಕೆ ಬಂದು ತನ್ನ ಕೋರಿಕೆಯನ್ನು ಪತ್ರದ ಮೂಲಕ ರಾಜನಿಗೆ ತಿಳಿಸಿ ಅದೇ ಊರಿನಲ್ಲಿ ತಲೆಮರೆಸಿಕೊಂಡಿದ್ದನೆಂದೂ ಉದ್ಯಾನದಲ್ಲಿ ಸೇರಿಕೊಂಡು ಹಿಂಸಾಕೃತ್ಯದಲ್ಲಿ ತೊಡಗಿದ್ದ ಸಿಂಹವನ್ನು ಕೊಂದವರು ರಾಜಕುಮಾರಿಯ ಕೈ ಹಿಡಿಯಬಹುದೆಂದು ದೊರೆ ಡಂಗುರ ಹೊಡೆಸಿದನೆಂದೂ ಚಿತ್ರಶೇಖರ ಆ ಸಿಂಹವನ್ನು ಕೊಂದು ರತ್ನಾವತಿಯನ್ನು ವರಿಸಿದನೆಂದೂ ವಿಕ್ರಮರಾಯರಿಗೆ ಗಂಡು ಸಂತತಿ ಇರಲಿಲ್ಲವಾದ್ದರಿಂದ ಅವನ ಅನಂತರ ಇವನಿಗೆ ರಾಜ್ಯ ಸೇರಿತೆಂದೂ ಐತಿಹ್ಯವಿದೆ. ಇವನ ಅನಂತರ ಬಾಲವೀರ ಮತ್ತು ನರಸಿಂಹ ಎಂಬಿಬ್ಬರು ರಾಜ್ಯವಾಳಿದರೆಂದು ಹೇಳಲಾಗಿದೆ. ನೀಲಾವತಿ ಪಟ್ಟಣವನ್ನು ಹೊಯ್ಸಳ ರಾಜರು ವಶಪಡಿಸಿಕೊಂಡಿದ್ದರು. ಅತ್ಯಂತ ಕಲಾತ್ಮಕವಾಗಿದ್ದು ಇಂದು ಭಗ್ನವಾಗಿರುವ ಅನೇಕ ಸುಂದರ ವಿಗ್ರಹಗಳೂ ಗುಡಿಗೋಪುರಗಳ ಪಳೆಯುಳಿಕೆಗಳೂ ಇವೆ. 1065ರ ಹೊಯ್ಸಳ ಶಾಸನವೊಂದಿದೆ. ಹೊಯ್ಸಳರ ಆಳ್ವಿಕೆಯ ಅನಂತರ ದಾಳಿಗೆ ತುತ್ತಾಗಿ ಈ ಪಟ್ಟಣ ಹಾಳಾಗಿರಬೇಕೆಂದು ತೋರುತ್ತದೆ.											(ಎಚ್.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ